ರಾಜ್ಯದಲ್ಲಿ ಮೋಡ ಬಿತ್ತನೆ? ಯಾವಾಗ ಗೊತ್ತಾ?

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಕೈಕೊಟ್ಟು, ಹಿಂಗಾರು ಮಳೆ ನಂಬಲು ಆಗದ ಸ್ಥಿತಿ ನಿರ್ಮಾಣವಾಗಿರುವುದರಿಂದ ಮೋಡ ಬಿತ್ತನೆಗೆ ಸರಕಾರ ಚಿಂತನೆ ನಡೆಸಿದೆ.

ಈಗಾಗಲೇ ಹಾವೇರಿಯಲ್ಲಿ ಮಾಜಿ ಸ್ಪೀಕರ್ ಕೋಳಿವಾಡ ಪುತ್ರ ಪ್ರಕಾಶ್‌ ಕೋಳಿವಾಡ ಅವರು ಜಿಲ್ಲೆಗೆ ಸೀಮಿತ ಮೋಡ ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ. ಆದರೆ ರಾಜ್ಯದಲ್ಲಿ ಈ ವರೆಗೆ ಮೋಡ ಬಿತ್ತನೆಯಲ್ಲಿ ಹೇಳಿಕೊಳ್ಳುವ ‘ಯಶಸ್ಸು ಕಾಣದೇ ಇರುವುದರಿಂದ ಸರಕಾರ ಆರಂಭದಲ್ಲಿ ಹಿಂದೇಟು ಹಾಕಿತ್ತು. ಆದರೀಗ ಮಳೆ ಪ್ರಮಾಣ ಭಾರಿ ತಗ್ಗಿರುವುದರಿಂದ ಅನಿವಾ ರ್ಯವಾಗಿ ಮೋಡ ಬಿತ್ತನೆಯ ಮೊರೆ ಹೋಗಿದೆ.

ಈ ಸಂಬಂಧ ಈಗಾಗಲೇ ಅಧಿಕಾರಿಗಳು ಸಿಎಂ ಸಿದ್ದರಾ ಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಬೇರೆ ದಾರಿ ಇಲ್ಲದೇ ಸರಕಾರವೂ ಒಪ್ಪಿದೆ ಎಂದು ತಿಳಿದುಬಂದಿದೆ.

ಶೀಘ್ರ ತೀರ್ಮಾನ: ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತ ನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮೋಡ ಬಿತ್ತನೆ ಮಾಡಲು ಎರಡು ಮೂರು ದಿನಗಳಲ್ಲಿ ಸರಕಾರ ನಿರ್ಧಾರ ಮಾಡಲಿದೆ. ಎರಡು ದಿನಗಳಿಂದ ಬೆಂಗಳೂರುನಗರ ಹಾಗೂ ಸುತ್ತಾಮುತ್ತ ಸುರಿದ ಮಳೆಯಿಂದ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ. ಮೋಡ ಬಿತ್ತನೆಯಿಂದ ಪರಿಸ್ಥಿತಿ ಸುಧಾರಿಸಬಹುದು ಎನ್ನುವ ನಂಬಿಕೆ ಇದೆ. ಸಚಿವ ಸಂಪುಟ ಸಭೆಯಲ್ಲಿ ಮೋಡ ಬಿತ್ತನೆ ಹಾಗೂ ಕಾವೇರಿ ನೀರು ಸಂಕಷ್ಟದ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

 

Leave a Comment